ವೈದಿಕ-ವ್ಯಾಕರಣ ೨


ವೈದಿಕ-ವ್ಯಾಕರಣ ೨
ಅಧ್ಯಾಯ ೨
ಸನ್ಧಿ-ಪ್ರಕರಣ
ವೈದಿಕಭಾಷೆಯಲ್ಲಿ ಸಂಧಿಯ ನಿಯಮಗಳು ಪ್ರಾಯಶಃ ಲೌಕಿಕಭಾಷೆಯ ಸಂಧಿನಿಯಮಗಳಂತೆಯೇ ಇವೆ. ಆದರೆ, ಈ ಸಂಧಿಗಳ ಹೆಸರುಗಳು ಮಾತ್ರ ಭಿನ್ನವಾಗಿವೆ.

ಸ್ವರ-ಸಂಧಿ

೧. ಪ್ರಶ್ಲಿಷ್ಟ-ಸನ್ಧಿ (Contracted / ಸಮೀಪಿಸಿದ / ಸಂಕೋಚಿಸಿದ)

(ಪ್ರಶ್ಲಿಷ್ಟ— ಶ್ಲಿಷ ಆಲಿಂಗನೇ ಧಾತು; ಸ್ವರಗಳು ಒಂದನ್ನೊಂದು ಹತ್ತಿರ ಸೇರುವ ಸಂಧಿಪ್ರಕ್ರಿಯೆ)
  • ಎರಡು ಸಮಾನ ಅಕ್ಷರ (ಸ್ವರ)ಗಳ ಸಂಧಿಯಾಗುವಾಗ ಆ ಸಮಾನಾಕ್ಷರವು ದೀರ್ಘವಾಗುತ್ತದೆ. ("ಸಮಾನಾಕ್ಷರೇ ಸಂಸ್ಥಾನೇ ದೀರ್ಘಮೇಕಮುಭೇ ಸ್ವರಮ್ |") ಅಂದರೆ, ಅ, ಇ, ಉ, ಋ— (ಹ್ರಸ್ವ / ದೀರ್ಘ) ಗಳ ಮುಂದೆ ಅವುಗಳದೇ ಹ್ರಸ್ವ / ದೀರ್ಘರೂಪಗಳು ಬಂದರೆ, ಅನುಕ್ರಮವಾಗಿ ಆ, ಈ, ಊ, ೠ— ಆಗುವುವು.
ಉದಾ— ಅಶ್ವ + ಅಜನಿ— ಅಶ್ವಾಜನಿ |
             ಸ್ರುಚಿ + ಇವ— ಸ್ರುಚೀವ |
             ಮಧು + ಉದಕಮ್— ಮಧೂದಕಮ್ |
             ಪಿತೃ + ಋಣಮ್— ಪಿತೄಣಮ್ ||
(ಲೌಕಿಕಸಂಸ್ಕೃತದಲ್ಲಿ ಇದಕ್ಕೆ ಸವರ್ಣದೀರ್ಘಸಂಧಿ ಎಂದು ಹೆಸರು. "ಅಕಃ ಸವರ್ಣೇ ದೀರ್ಘಃ"— ಪಾಣಿನೀಯಸೂತ್ರ)  
  • ಅ, ಆ— ಗಳ ಮುಂದೆ ಇ, ಈ— ಬಂದಾಗ ಅವೆರಡೂ ಸೇರಿ ಏ       ಆಗುವುದು. ಉದಾ— ಆ + ಇನ್ದ್ರಮ್— ಏನ್ದ್ರಮ್ || ("ಇಕಾರೋದಯ ಏಕಾರಮಕಾರಃ ಸೋದಯಃ ಸ್ಮೃತಃ || ೧ ||")
  • ಅ, ಆ— ಗಳ ಬಳಿಕ ಉ, ಊ— ಗಳು ಬಂದಾಗ, ಅವೆರಡರ ಬದಲಿಗೆ ಓ ಬರುತ್ತದೆ. ("ಉಕಾರೋದಯ ಓಕಾರಮ್")  ಉದಾ— ಏತಾಯಾಮ + ಉಪ— ಏತಾಯಾಮೋಪ ||
{ಈ ಮೇಲಿನೆರಡು ಸಂಧಿಗಳು (ಏಕಾರ ಹಾಗೂ ಓಕಾರ ಬರುವವುಗಳು) ಲೌಕಿಕಸಂಸ್ಕೃತದ "ಆದ್-ಗುಣಃ" ಎಂಬ ಸೂತ್ರದನ್ವಯ ಬರುವ ಗುಣಸಂಧಿಗೆ ಸಮಾನವಾಗಿವೆ.}

  • ಅ, ಆ— ಗಳ ಮುಂದೆ ಸಂಧ್ಯಕ್ಷರಗಳಲ್ಲಿ ಮೊದಲ ಹಾಗೂ ಮೂರನೆಯದಾದ ಏ ಅಥವಾ ಐ ಬಂದರೆ, ಇವೆರಡೂ ಸೇರಿ ಐ ಆಗುವುದು ("ಪರಸ್ಯೈಕಾರಮೋಜಯೋಃ |"). ಉದಾ— ಆ + ಏನಮ್— ಐನಮ್ ||
  • ಅ, ಆ— ಗಳ ಅನಂತರ ಯಾವಾಗ ಯುಗ್ಮ ಸಂಧ್ಯಕ್ಷರ, ಅಂದರೆ ಓ / ಔ ಬರುತ್ತವೋ ಆಗ, ಎರಡರ ಸ್ಥಾನದಲ್ಲಿ ಔ ಬರುವುದು ("ಔಕಾರಂ ಯುಗ್ಮಯೋರೇತೇ ಪ್ರಶ್ಲಿಷ್ಟಾ ನಾಮ ಸನ್ಧಯಃ ||೨ ||"). ಉದಾ— ಯತ್ರ + ಓಷಧೀಃ— ಯತ್ರೌಷಧೀಃ ||
ಮೇಲಿನೆರಡೂ ರೀತಿಯ ಸಂಧಿಗಳು (ಅ+ಏ—ಐ, ಅ+ಓ—ಔ) ಲೌಕಿಕಸಂಸ್ಕೃತದ "ವೃದ್ಧಿರೇಚಿ" ಪಾಣಿನಿಸೂತ್ರದಂತೆ ಉಂಟಾಗುವ ಗುಣಸಂಧಿಗೆ ಸಂವಾದಿಯಾಗಿವೆ.

೨. ಕ್ಷೈಪ್ರ-ಸನ್ಧಿ (Hastened / ಕ್ಷಿಪ್ರ—ವೇಗ)

"ಸಮಾನಾಕ್ಷರಮನ್ತಸ್ಥಾಂ ಸ್ವಾಮಕಣ್ಠ್ಯಂ ಸ್ವರೋದಯಮ್"

ಆಕಂಠ್ಯವಾದ ಸಮಾನಾಕ್ಷರ (ಸಮಾನ ಸ್ವರ) ಗಳಾದ ಇ, ಉ, ಋ, ಲೃ ಹಾಗೂ ಇವುಗಳ ದೀರ್ಘಸ್ವರಗಳ ಮುಂದೆ ಅಸಮಾನ ಸ್ವರಗಳು ಬಂದಾಗ, ಇವು ಆಯಾಯ ಅಂತಸ್ಥಗಳಾದ (Semivowel) ಯ್, ವ್, ರ್, ಲ್ ಆಗುತ್ತವೆ. ಉದಾ— ಅಭಿ (ಇ) + (ಆ) ಆರ್ಷೇಯಮ್— ಅಭ್ಯಾರ್ಷೇಯಮ್ (ಯ್), ಅಧೀನ್ನು (ಉ) + (ಅ) ಅತ್ರ— ಅಧೀನ್ನ್ವತ್ರ (ವ್) ||

(ಲೌಕಿಕಸಂಸ್ಕೃತದಲ್ಲಿ ಇದು "ಇಕೋ ಯಣಚಿ" ಸೂತ್ರಾಂತರ್ಗತವಾದ ಯಣ್-ಸನ್ಧಿ ಎನ್ನಲ್ಪಡುವುದು.)

೩. ಅಭಿನಿಹಿತ-ಸನ್ಧಿ (Absorbed / ಹೀರಿಕೊಂಡ / ಒಳಸೇರಿಕೊಂಡ / ಅತಿ ಸನ್ನಿಹಿತವಾದ)

"ಅಥಾಭಿನಿಹಿತಃ ಸನ್ಧಿರೇತೈಃ ಪ್ರಾಕೃತವೈಕೃತೈಃ |
ಏಕೀಭವತಿ ಪಾದಾದಿರಕಾರಸ್ತೇऽತ್ರ ಸನ್ಧಿಜಾಃ || ೧ ||"

ಪ್ರಾಕೃತ (ಸಮಾನ / ಮೂಲ)ಸ್ವರವಾದ 'ಅ'ಕಾರ ಹಾಗೂ ವೈಕೃತ (ಸಂಧ್ಯಕ್ಷರ / ಸಂಯುಕ್ತ)ಸ್ವರಗಳಾದ ಏ (ಅ+ಇ), ಓ(ಅ+ಉ)ಗಳ ನಡುವೆ ಸಂಧಿಯಾದಾಗ, ಏ, ಓ ಗಳು ಮಂತ್ರಪಾದದ ಕೊನೆಗೆ ಬಂದು, ಮುಂದಿನ ಪಾದಾರಂಭದಲ್ಲಿ 'ಅ'ಕಾರ ಬಂದರೆ, ಅಕಾರವು ಹಿಂದಿನ ಏ, ಓ-ಗಳೊಂದಿಗೆ ಸೇರಿಕೊಳ್ಳುತ್ತದೆ ಹಾಗೂ ಅವಗ್ರಹಚಿಹ್ನೆ (ऽ)ಯು ಆ ಸ್ಥಾನಕ್ಕೆ ಬರುತ್ತದೆ. 
ಉದಾ— ತೇ + ಅತ್ರ— ತೇऽತ್ರ |
             ಸೂನವೇ + ಅಗ್ನೇ— ಸೂನವೇऽಗ್ನೇ |
             ದಾಶುಷೇ + ಅಗ್ನೇ— ದಾಶುಷೇऽಗ್ನೇ |
             ರಥೇಭ್ಯೋ + ಅಗ್ನೇ— ರಥೇಭ್ಯೋऽಗ್ನೇ ||
             
"ಅನ್ತಃ ಪಾದಮಕಾರಾಚ್ಚೇತ್ಸಂಹಿತಾಯಾಂ ಲಘೋರ್ಲಘು |
ಯಕಾರಾದ್ಯಕ್ಷರಪರಂ ವಕಾರಾದ್ಯಪಿ ವಾ ಭವೇತ್ || ೨ ||"

ಪಾದದ ಅಂತ್ಯದಲ್ಲಿನ ಅಥವಾ ಪಾದದ ಅಂತರ್ಗತವಾಗಿ ಮಧ್ಯದಲ್ಲಿನ 'ಅ'ಕಾರದ ಮುಂದೆ ಯ ಅಥವಾ ವ ಬಂದರೆ, 'ಅ' ಕಾರದ ಹಿಂದಿನ ಏ, ಓ ಗಳೊಂದಿಗೆ 'ಅ' ಕಾರವು ಸೇರಿ ಏಕರೂಪವಾಗಿ, ಅವಗ್ರಹ (ऽ) ಚಿಹ್ನೆಯಿಂದ ಗುರುತಿಸಲ್ಪಡುತ್ತದೆ.
ಉದಾ— ಸೋऽಯಮಾಗಾತ್— ಸೋ + ಅಯಮಾಗಾತ್ |
             ತಂ ಪೃಚ್ಛನ್ತೋऽವರಾಸಃ— ತಂ ಪೃಚ್ಛನ್ತೋ + ಅವರಾಸಃ ||

"ಅನ್ಯಾದ್ಯಾಪಿ ತಥಾಯುಕ್ತ-ಮಾವೋऽನ್ತೋಪಹಿತಾತ್ಸತಃ |
ಅಯೇऽಯೋऽವೇऽವ ಇತ್ಯನ್ತೈ-ರಕಾರಃ ಸರ್ವಥಾऽಭವನ್ || ೩ ||"

ಆವೋ, ಅಯೇ, ಅಯೋ, ಅವೇ— ಗಳ ಮುಂದೆ 'ಅ' ಕಾರ ಬಂದು, ಬಳಿಕ ಯ, ವ— ಗಳನ್ನು ಬಿಟ್ಟು ಇತರ ಯಾವುದೇ ವ್ಯಂಜನವು ಬಂದರೂ, 'ಅ' ಕಾರಕ್ಕೆ ಪೂರ್ವರೂಪವು ('ಅ'ಕಾರದ ಹಿಂದಿನ ಸ್ವರರೂಪವು) ಬರುವುದು.
ಉದಾ—
ಗಾವೋ + ಅಭಿತಃ— ಗಾವೋऽಭಿತಃ |
ಅಜೀತಯೇ + ಅಹತಯೇ— ಅಜೀತಯೇऽಹತಯೇ |
ಅಞ್ಜಯೋ + ಅರುಣಯೋ— ಅಞ್ಜಯೋऽರುಣಯೋ |
ಪೇದವೇ + ಅಶ್ವಿನಾ— ಪೇದವೇऽಶ್ವಿನಾ |
ಸೂನವೇ + ಅಗ್ನೇ— ಸೂನವೇऽಗ್ನೇ |
ಪುರೂರವೋ + ಅನು— ಪುರೂರವೋऽನು ||

"ವೇತ್ಯೇತೇನ ಚಾ ನ ಪ್ರ ಕ್ವ ಚಿತ್ರಃ ಸವಿತೈವ ಕಃ |
ಪದೈರುಪಹಿತೇನೈತೈಃ ಪಿತರಂ ನ ಪುತ್ರೋ ಅನ್ಯಃ ||
ಯನ್ನಾಸತ್ಯಾ ಪರಾಕೇ ಅರ್ವಾಕೇ ಅವಿವಾಸನ್ಯರಾವತೋ ಅಥೋ ||"

'ಅ' ಕಾರದ ಮೊದಲು 'ವೋ' ಬಂದು, ಅದಕ್ಕೂ ಹಿಂದೆ ಆ, ನ, ಪ್ರ, ಕ್ವ, ಚಿತ್ರ, ಸವಿತಾ, ಏವ, ಕಃ ಶಬ್ದಗಳು ಬಂದರೆ, 'ಅ'ಕಾರಕ್ಕೆ ಪೂರ್ವರೂಪವಾಗುತ್ತದೆ.
ಉದಾ— ಆವೋऽಹಂ | ನ ವೋऽಶ್ವಾಃ | ಪ್ರವೋऽಚ್ಛಾ | ಕ್ವ ವೋऽಶ್ವಾ | ಚಿತ್ರೋವೋऽಸ್ತು ತತ್ಸವಿತಾ ವೋऽಮೃತತ್ವಮ್ | ಅತ್ರೈವ ವೋऽಪಿನಹ್ಯಾಮಿ | ಕೋ ವೋऽನ್ತರ್ಮರುತ ||

ಆದರೆ, 'ಪುತ್ರೋ', 'ಪರಾಕೇ', 'ಪರಾವತೋ' ಗಳ ಬಳಿಕ ಬರುವ ಅನ್ಯ, ಅರ್ವಾಕ್, ಅಥ— ಇವುಗಳ 'ಅ'ಕಾರಕ್ಕೆ ಪರರೂಪವು ಬರುವುದಿಲ್ಲ. 

ಈ ಅಭಿನಿಹಿತಸಂಧಿಯು ಲೌಕಿಕ ಸಂಸ್ಕೃತದಲ್ಲಿ "ಏಙಿ ಪರರೂಪಮ್" ಎಂಬ ಪಾಣಿನೀಯಸೂತ್ರದಂತೆ ಆಗುವ ಪರರೂಪಸಂಧಿ ಗೆ ಸಮಾನವಾಗಿದೆ.


೪. ಭುಗ್ನ-ಸನ್ಧಿ (Bent, bowed, curved, broken, ಬಾಗಿದ, ವಕ್ರೀಕೃತ, ಮುರಿದ)

"ಓಷ್ಠ್ಯಯೋऽನ್ಯೋರ್ಭುಗ್ನಮ್ ಅನೋಷ್ಠ್ಯೇ ವಕಾರೋऽತ್ರಾನ್ತರಾಗಮಃ ||"

ಸಂಧಿಯಾಗುವಾಗ ಪೂರ್ವಪದಾಂತ್ಯದಲ್ಲಿ ಓಷ್ಠ್ಯ (ತುಟಿಯಿಂದ ಉಚ್ಚರಿಸಲ್ಪಡುವ) ಸ್ವರಗಳಾದ ಓ, ಔ ಗಳಿದ್ದು, ಅವುಗಳ ಮುಂದೆ ಉತ್ತರಪದಾರಂಭದಲ್ಲಿ ಅನೋಷ್ಠ್ಯ ಸ್ವರಗಳಾದ ಅ, ಆ ಬಂದಾಗ, ಓ, ಔ ಗಳು ಅ, ಆ ಗಳಾಗುತ್ತವೆ. ಹಾಗೆಯೇ, ಹೀಗೆ ಬಂದ ಅ, ಆ ಗಳು ಹಾಗೂ ಮೊದಲೇ ಉತ್ತರ ಪದಾರಂಭದಲ್ಲಿದ್ದ ಅನೋಷ್ಠ್ಯ ಅ, ಆ ಗಳ ನಡುವೆ 'ವ್' ಆಗಮವಾಗುತ್ತದೆ.

ಉದಾ— 
"ವಾಯವಾ ಯಾಹಿ ದರ್ಶತ" ಎಂಬಲ್ಲಿನ "ವಾಯವಾ ಯಾಹಿ"— 
ವಾಯೋ + ಆಯಾಹಿ— 
ವಾಯ್ + ಓ + ಆಯಾಹಿ — 
ವಾಯ್ + ಅ + ವ್ + ಆಯಾಹಿ—
ವಾಯ್ + ಅವ್ + ಆಯಾಹಿ—
ವಾಯವಾ ಯಾಹಿ ||

ಇದು ಲೌಕಿಕಸಂಸ್ಕೃತದ "ಏಚೋऽಯವಾऽऽಯಾऽವಃ" ಎಂಬ ಪಾಣಿನೀಸೂತ್ರದಂತೆ ನಡೆಯುವ ಯಾನ್ತಾದೇಶ-ವಾನ್ತಾದೇಶ ಸಂಧಿ ಗೆ ಸಮಾನವಾದುದು.

Comments

  1. ತುಂಬಾ ಚನ್ನಾಗಿ ಬರ್ತಿದೆ ಸರ್ ದಯವಿಟ್ಟು ಮುಂದುವರೆಸಿ...

    ReplyDelete

Post a Comment

Popular posts from this blog

छन्दःशास्त्रभूमिका

संस्कृतशब्दव्युत्पत्ति-पर्यायपद-कोशः (संस्कृत-संस्कृत-ENGLISH)

सरलपाणिनीयम्